By Sushma Odugoudar
ಕಥೆಯೊಂದನ್ನು ಓದುವ ತವಕದಿಂದ, ಕಥೆಯ ಹೊಸ್ತಿಲಲ್ಲಿ ನಿಂತಿರುವ ಕಥಾಸಕ್ತರಿಗೆ ನನ್ನದೊಂದು ನಮಸ್ಕಾರ.’ನಾನು ನನ್ನ ಕಥೆ’ ಯನ್ನು ಹೇಳುವ ಮುನ್ನ ನಿಮಗೆ ನನ್ನ ಪರಿಚಯ ಮಾಡಿಕೊಳ್ಳುವುದು ಒಳ್ಳೆಯದಲ್ಲವೇ? ನಾನು,ಉಣ್ಣೆ – ಆಕರ್ಷಕ ಕಡು-ನೀಲಿ ಬಣ್ಣ, ಸ್ಪರ್ಶಕ್ಕೆ ಮೃದು ಹಾಗೂ ಹೆಣೆಯಲು ಸಿದ್ಧವಾಗಿ 6 ಲಡಿ (wool skein) ಗಳಾಗಿ ಮಾರ್ಪಟ್ಟು ಡಬ್ಬದಲ್ಲಿ ಖೈದಿಯಾಗಿ, ಚಳಿಗಾಲದಲ್ಲಿ ನಿಮ್ಮನ್ಮು ಬಿಗಿದು ಅಪ್ಪಿಕೊಳ್ಳುವ, ಚಳಿಯಲ್ಲಿಯೂ ನಿಮ್ಮನ್ನು ಬೆಚ್ಚಗೆ ಇಡುವ ಸುಂದರ – ಸ್ವೆಟರ್, ಮುಫ್ಲರ್, ಸ್ಕ್ಯಾರ್ಫ್, ಮಿಟನ್ ಅಥವಾ ಸಾಕ್ಸ್ ಆಗಲು ಕಾಯುತ್ತಿರುವ ಮೂಲ ಸಾಮಗ್ರಿ (raw material).
ಪರಿಚಯ ಮಾಡಿಕೊಂಡಾಯ್ತಲ್ಲ...ಇನ್ನೇಕೆ ತಡ!? ನಾನು ನನ್ನ ಕಥೆಯನ್ನು ಪ್ರಾರಂಭಿಸುತ್ತೇನೆ.
ಎಂದಿನಂತೆ ಈ ಅಂಗಡಿಯಿಂದ, ಈ ಡಬ್ಬದಿಂದ ಮುಕ್ತಿ ಪಡೆದು ಒಂದು ಸುಂದರ ಉಣ್ಣೆ ಉಡುಪು ಆಗುವ ಆಸೆಹೊತ್ತು ಕಾಯುತ್ತಿರುವಾಗ, “Excuse me, ನಿಮ್ಮಲ್ಲಿ ಕಡು-ನೀಲಿ ಬಣ್ಣದ ಉಣ್ಣೆ ಲಭ್ಯವಿದೆಯೇ?” ಎಂದು ಮಧುರವಾದ ಹೆಣ್ಣು ಧ್ವನಿಯೊಂದು ಕೇಳಿ ಬಂತು. ನಾನು ಆ ಧ್ವನಿಗೆ ಮಾರುಹೋಗಿ, ಧ್ವನಿಯ ಒಡತಿಗೆ ‘ಮಧುರಾ’ ಎಂದು ನನ್ನ ಮನದಲ್ಲಿಯೇ ನಾಮಕರಣ ಮಾಡಿಬಿಟ್ಟೆ. ಮಧುರಾಳ ಗಮನ ನನ್ನತ್ತ ವಾಲುವಂತೆ ಹೇಗೆ ಮಾಡಲಿ? ಡಬ್ಬದಿಂದ ನೆಗೆದು ಆಚೆ ಬಂದುಬಿಡಲೇ ಎಂದು ಯೋಚಿಸುತ್ತಿರುವಾಗ, ನನ್ನ ತುಡಿತವನ್ನು ನೋಡಲಾಗದೆಯೋ ಅಥವಾ ಕೊನೆಗೂ ಈ ಕಡು ನೀಲಿ ಉಣ್ಣೆ ಖರ್ಚಾಗುವ ಸಮಯ ಬಂತು ಅನ್ನೋ ನಿರಾಳತೆ ಇಂದೋ...ಅಂಗಡಿಯಾತ ನಾನಿರುವ ಡಬ್ಬವನ್ನು ಎತ್ತಿ ಅವಳ ಮುಂದೆ ತೆರೆದಿಟ್ಟ.
ನನ್ನನು ನೋಡುತ್ತಿದ್ದಂತೆಯೇ ನನ್ನ ‘ಮಧುರಾ’ಳ ಮುಖದಲ್ಲಿ ಮಂದಹಾಸ ಒಂದು ಮೂಡಿತು. ಇನ್ನೂ ನನ್ನ ಪರಿಸ್ಥಿತಿ ಕೇಳ್ತಿರಾ.. ಮೊದಲ ನೋಟದಲ್ಲೇ ಅವಳ ಮೇಲೆ ಪ್ರೀತಿಯಾಗಿಹೋಯ್ತು. ಧ್ವನಿ ಕೇಳಿ ಮಾರುಹೋಗಿ ಮಧುರಾ ಎಂದು ಹೆಸರಿಟ್ಟ ನಾನು, ಅವಳ ಮುಖದಲ್ಲಿ ಅರಳಿದ ಮಂದಹಾಸವನ್ನು ನೋಡಿ..ಮಧುರಾ ಬೇಡ, ಇವಳನ್ನು ‘ಸ್ಮಿತಾ’ ಅನ್ನಲೇ ಎಂದು ಗೊಂದಲಕ್ಕೊಳಗಾದೆ. ಅಷ್ಟರಲ್ಲಿ ಅವಳು, ಎಲ್ಲಿ ಜೋರಾಗಿ ಮುಟ್ಟಿದರೆ ನನಗೆ ನೋವಾಗಬಹುದೇನೋ ಎಂಬ ನಾಜೂಕಿನಿಂದ ನನ್ನನು ಎತ್ತಿ ಮುಟ್ಟಿ ನೋಡಿದಳು. ಆ ಸ್ಪರ್ಶಕ್ಕೆ ಅದರ ಅನುಭೂತಿಗೆ ನಾನು ಕರಗಿಹೋದೆ! ಏನಪ್ಪಾ...ಉಣ್ಣೆ ಮಹಾಶಯ, ಇವಾಗ ಯಾವ ಅನುರೂಪ ಹೆಸರು ಮೂಡಲ್ಲಿಲವೇ ಎಂದು ಕೇಳಬೇಡಿ..ನಾನು ಇನ್ನೇನು, ಅದನ್ನೇ ಹೇಳುವನಿದ್ದೆ, ಅವಳ ಮೃದುವಾದ ಸ್ಪರ್ಶಕ್ಕೆ ಕರಗಿ ನಾನು ಅವಳನ್ನು ‘ಮೃದುಲಾ’ ಅನ್ನಲೇ ಎಂದು ಯೋಚನೆ ಮಾಡುತ್ತಿದೆ. ನಾನು ಅವಳಿಗೆ ನಾಮಾವಳಿ ತಯಾರಿಸುವಲ್ಲಿ ಬ್ಯುಸಿ ಇದ್ದೆ... ಅತ್ತ ಅವಳು ಎರಡನೇ ಯೋಚನೆ ಇಲ್ಲದೆಯೇ ನನ್ನನು ತನ್ನೊಟ್ಟಿಗೆ ಕರೆದೊಯ್ಯುವ ತಯಾರಿಯಲ್ಲಿದ್ದಳು. ಈಗಾಗಲೇ 3 ಸುಂದರ ನಾಮಗಳನ್ನು ಇವಳಿಗಾಗಿ ಯೋಚಿಸಿದ್ದರೂ ಅದು ಯಾವುದೂ ಇವಳಿಗೆ ಸಾಟಿ ಅಲ್ಲ ಎಂದೆನಸಿ ಯಾವ ಹೆಸರೂ ಬೇಡ ‘ನನ್ನವಳು’ ಅಂತಾ ಕರೆಯೋಣ ಅಂತಾ ನಿರ್ಧಾರ ಮಾಡಿ ನನ್ನ ನಿರ್ಧಾರಕ್ಕೆ ನಾನೇ ಶಭಾಷ್ ಎಂದು ಕೊಳ್ಳುತ್ತಿದೆ.
ಅಂಗಡಿಯಾತ ಅವಳಿಂದ ಹಣ ಪಡೆದು ನನ್ನನು ಅವಳೊಟ್ಟಿಗೆ ಬೀಳ್ಕೊಟ್ಟ. ನಾನು ಖುಷಿಯಿಂದ ಅವಳ ದಾಸನಾಗಿ ಅವಳ ಬ್ಯಾಗಿನಲ್ಲಿ ಕುಳಿತು ಅವಳೊಟ್ಟಿಗೆ ನನ್ನ ಹೊಸ ಪ್ರಯಾಣಕ್ಕೆ ಸಿದ್ಧನಾದೆ. ಅವಳ ಕೈಯಿಂದ ನನಗೆ ಸಿಗುವ ಹೊಸ ಸ್ವರೂಪವನ್ನು ನೆನೆದು ಪುಳಕಿತನಾದೆ. ಹಾಗೆಯೆ ಅವಳೊಂದಿಗೆ ಅವಳ ಮನೆ ಸೇರಿಕೊಂಡೆ. ಅಲ್ಲಿಂದ ಶುರುವಾಯಿತು ನಮ್ಮಿಬ್ಬರ ಒಡನಾಟ. ಅವಳಿಗೆ ಸಮಯ ಸಿಕ್ಕಾಗೆಲ್ಲ ಅವಳ ಕೈಯಲ್ಲಿ ನಾನಿರುತ್ತಿದ್ದೆ. ದಿನೇ-ದಿನೇ ಹೆಣಿಕೆ ಸಾಗಿದಂತೆ ನಾನು ಪೂರ್ಣಗೊಂಡ ಮೇಲೆ ಏನಾಗಬಹುದು ಎಂಬುದು ನನಗೆ ಅರ್ಥವಾಯಿತು. ಅವಳು ನನ್ನನ್ನು ಒಂದು ಸುಂದರ ಸ್ವೆಟರ್ ಆಗಿ ಪರಿವರ್ತಿಸುತ್ತಿದ್ದಳು.
ಅವಳು ಹೆಣೆಯುತ್ತಿರುವಂತೆಯೇ ನನಗೆ ಇನ್ನೂ ಒಂದು ವಿಚಾರ ಮನವಿ ಆಯ್ತು..ನಾನು ಸ್ವೆಟರ್ ಅಗುತ್ತಿರುವುದು ಅವಳಿಗಾಗಿ ಅಲ್ಲ ಎಂದು. ಏಕೆಂದರೆ ನನ್ನ ಅಳತೆ ಅವಳಿಗೆ ಸಮ ಆಗುವಂತೆ ಇರಲಿಲ್ಲ. ದೊಡ್ಡ ಅಳತೆಯ ಸ್ವೆಟರ್ ಹೆಣೆಯುತ್ತಿದ್ದಳು. ಹಾಗೆಯೆ ಡಿಸೈನ್ ಕೂಡ, ಹೆಣ್ಣುಮಕ್ಕಳು ತೊಡುವಂತಹ ಡಿಸೈನ್ ಆಗಿರಲಿಲ್ಲ. ಯಾರೋ ಪುರುಷನಿಗಾಗಿ ಹೆಣೆಯುತ್ತಿದಳು. ಕೆಲ ಸಮಯದ ನಂತರ ನನಗೆ ಅರ್ಥವಾಗಿದ್ದು ಅವಳು ಹೆಣೆಯುತ್ತಿದ್ದದ್ದು ಅವಳ ಗಂಡನಿಗಾಗಿ ಎಂದು. ನನ್ನ ಮನಸ್ಸಿಗೆ ಸ್ವಲ್ಪ ಬೇಜಾರಾಯ್ತು ಅನ್ನಿ. ಯಾಕೆ ಅಂತೀರಾ? ನಾನು ಸ್ವೆಟರ್ ಆಗಿ ತಯಾರಾದ ಮೇಲೆ ಅವಳೇ ನನ್ನನ್ನು ಧರಿಸುತ್ತಾಳೆ ಎಂಬ ಕನಸು ಕಂಡಿದ್ದೆ. ಆದರೂ ಒಂದು ಸಮಾಧಾನ ಇತ್ತು..ಸ್ವೆಟರ್ ಹೆಣಿಕೆ ಪೂರ್ಣವಾಗುವ ವರೆಗೂ ಅವಳ ಹಾಗೂ ನನ್ನ ಒಡನಾಟಕ್ಕೆ ಯಾವುದೇ ಅಡ್ಡಿ ಆತಂಕಗಳಿರಲ್ಲಿಲ.
ಅವಳು ಕೆಲವೊಮ್ಮ ನನ್ನನ್ನು ಕೈಯಲ್ಲಿ ಹಿಡಿದು ತನ್ನ ಮಧುರವಾದ ಕಂಠದಿಂದ ಹಾಡುಗಳನ್ನು ಹಾಡುತ್ತಿದಳು ಹಾಗೂ ನಾನು ಆಸ್ವಾದಿಸುತ್ತಿದ್ದೆ. ಇನ್ನೂ ಕೆಲವೊಮ್ಮ TV ಕಾರ್ಯಕ್ರಮಗಳನ್ನು ಇಬ್ಬರೂ ಒಟ್ಟಿಗೆ ನೋಡುತ್ತಿದೆವು ಅವಳು ನಕ್ಕಾಗ ನಾನು ನಗುತ್ತಿದೆ ಅತ್ತಾಗ ನಾನು ಅಳುತ್ತಿದೆ.. ಮತ್ತೆ ಕೆಲವೊಮ್ಮೆ ಕುರುಕಲು ತಿಂಡಿಗಳನ್ನು ತಿನ್ನುತ್ತಾ..ಉಪ್ಪು, ಖಾರ, ಹುಳಿ ಮುಂತಾದವುಗಳ ಪರಿಚಯವನ್ನೂ ನನಗೆ ಮಾಡಿಸಿದ್ದಳು. ಹೀಗೇ ಸುಂದರವಾಗಿ ಸಾಗುತ್ತಿತ್ತು ನಮ್ಮಿಬ್ಬರ ದಿನಚರಿ. ನೋಡುನೋಡುತ್ತಿದಂತೆಯೇ ನಾನು ಕೇವಲ ಉಣ್ಣೆ ಇಂದ ಒಂದು ಆಕಾರ ತಾಳಲು ಆರಂಭಿಸಿದೆ. ಮೊದಲು ನನ್ನ ಬೆನ್ನಿನ ಭಾಗ ಮುಗಿಯಿತು..ಆಮೇಲೆ ಎದೆಯ ಭಾಗ. ಸಮಯ ಉರುಳುತ್ತಿತು ಹಾಗೂ ಹೆಣಿಕೆ ಸಾಗುತ್ತಿತ್ತು. ಇದನ್ನು ನಾನು ನಮ್ಮ ಪ್ರಯಾಣದ ಮೊದಲ ಅರ್ಧ ಎಂದೆನ್ನಬಹುದು.
ಹೀಗೇ ಸಾಗುತ್ತಿರಲು, ನಮ್ಮಿಬ್ಬರ ಒಡನಾಟಕ್ಕೆ ಯಾರ ಕಣ್ಣು ತಾಗಿತೋ ಗೊತ್ತಿಲ್ಲ, ನಮ್ಮ ಒಡನಾಟದ ಸಂತೋಷದ ಸಮಯ ಕ್ಷೀಣಿಸುತ್ತಾ ನಮ್ಮಿಬ್ಬರ ಪ್ರಯಾಣದ ಎರಡನೇ ಸುತ್ತು ಪ್ರಾರಂಭವಾಯ್ತು. ನಾನು ನನ್ನವಳಲ್ಲಿ ಬದಲಾವಣೆಗಳನ್ನು ಗಮನಿಸಹತ್ತಿದೆ. ಮೊದಲಿನಂತೆ ಅವಳು ಲವಲವಿಕೆ ಇಂದ ಇರುತ್ತಿರಲಿಲ್ಲ. ಏನೋ ಖಿನ್ನತೆ ಏನೋ ಉದಾಸೀನ ಅವಳನ್ನು ಕೊರೆಯುತ್ತಿದವು. ಕೆಲವೊಮ್ಮೆ ನಾನು ಕೈಯಲ್ಲೇ ಇದ್ದರೂ ನನ್ನನು ಮರೆತುಬಿಡಿತ್ತಿದ್ದಳು ಇನ್ನೂ ಕೆಲವೊಮ್ಮೆ ಕೈಗಳಲ್ಲಿ ಶಕ್ತಿಯೇ ಇಲ್ಲವೇನೋ ಎಂಬಂತೆ ಹೆಣಿಕೆ ಮುಂದುವರಿಸಲಾಗದೆ ನನ್ನನು ಪಕ್ಕಕ್ಕಿಟ್ಟು ನಿಟ್ಟುಸಿರು ಬಿಡುತ್ತಿದ್ದಳು. ಕೂತಲ್ಲಿಯೇ ನನ್ನನ್ನು ಮುಖಕೆ ಅವುಚಿಕೊಂಡು ಗೋಡೆಗೋ ದಿಂಬಿಗೊ ಅಥವಾ ಟೇಬಲ್ ಗೋ ಒರಗಿಕೊಂಡು ಜೋರಾಗಿ ಅಳುತ್ತಿದ್ದಳು.
ಏನು ನಡೀತಾ ಇದೆ ಎಂದು ಅರ್ಥ ಮಾಡಿಕೊಳ್ಳುವಲ್ಲಿ ನಾನು ಅಸಮರ್ಥನಾಗಿ ಹೋಗಿದ್ದೆ. ಕೆಲವೊಮ್ಮೆ ನನ್ನನು ಮನೆಯಲ್ಲಿಯೇ ಬಿಟ್ಟು ದಿನಗಳ ಕಾಲ ಮನೆಯಿಂದ ಆಚೆಯೇ ಇದ್ದದ್ದು ಉಂಟು. ಹಾಗೆಲ್ಲ ಮನೆ ಇಂದ ಆಚೆ ಇದ್ದು ಮನೆಗೆ ಮರಳಿದಾಗ, ದೇಹದಲ್ಲಿ ಜೀವವೇ ಇಲ್ಲವೇನೋ ಅನ್ನೋವಷ್ಟು ನಿಶಕ್ತಳಾಗಿರುತ್ತಿದಳು. ಮನೆಗೆ ಬಂದರೂ ಸಹ 4-5 ದಿನಗಳ ವರೆಗೆ ನನ್ನತ್ತ ಕಣ್ಣುಹಾಯಿಸಿಯೂ ನೋಡುತ್ತಿರಲಿಲ್ಲ. ಆಗೆಲ್ಲ ನನಗಾದ ಬೇಜಾರು ಅಷ್ಟಿಷ್ಟಲ್ಲ. ಆದರೂ ನನ್ನಿಂದ ಏನು ಮಾಡಲು ಸಾಧ್ಯ ಹೇಳಿ? ಎಷ್ಟೇ ಬೇಜಾರಾದರೂ ಸರಿ ಅವಳ ಒಂದು ಸ್ಪರ್ಷಕ್ಕಾಗಿ ಕಾಯುತ್ತಿದೆ, ಹಾತೊರೆಯುತ್ತಿದೆ. ‘ನನ್ನವಳು’ ಕೂಡ ಸ್ವಲ್ಪ ನನ್ನ ಹಾಗೆಯೆ ಅನ್ನಿ, ಏನೋ ದುಃಖ ಏನೋ ನೋವು ಅವಳನ್ನು ಒಳಗೊಳಗೇ ಕೊಲ್ಲುತ್ತಿದ್ದರು... ನನ್ನನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಶಕ್ತಿ ಅವಳಲ್ಲೂ ಇರಲಿಲ್ಲ. ನನ್ನನ್ನು ಪೂರ್ಣಗೊಳಿಸಲೇ ಬೇಕು ಎಂಬ ಆಸೆ ಛಲದಿಂದ ಮತ್ತೆ ಮತ್ತೆ ನನ್ನ ಹತ್ತಿರ ಬರುತ್ತಿದ್ದಳು. ನನ್ನನ್ನು ತನ್ನ ಕೈಯಲ್ಲಿ ಎತ್ತಿ ನೇವರಿಸುತ್ತಿದಳು, ಎದೆಗೆ ಅಥವಾ ಮುಖಕ್ಕೆ ಅವುಚಿಕೊಂಡು ಸಮಾಧಾನ ಆಗುವರೆಗೂ ಅಳುತ್ತಿದ್ದಳು. ಸ್ವಲ್ಪ ಸಮಾಧಾನ ಆದಮೇಲೆ ಕಣ್ಣೀರು ಒರೆಸಿಕೊಂಡು ನನಗೆ ಒಂದು ಮುತ್ತಿಕ್ಕಿ ಮತ್ತೆ ಹೆಣಿಕೆ ಶುರುಮಾಡುತ್ತಿದಳು. ಹೀಗೇ ಕುಂಟುತ್ತಾ ಕುಂಟುತ್ತಾ ಅಳುತ್ತ ನಗುತ್ತಾ ಸಾಗಿತ್ತು ನಮ್ಮ ಎರಡನೇ ಸುತ್ತಿನ ಪ್ರಯಾಣ. ಈ ಸುತ್ತಿನಲ್ಲಿ ಹೆಣಿಕೆಯಲ್ಲಿ ಅಷ್ಟೊಂದೇನೂ ಮುಂದೆ ಸಾಗಿರಲಿಲ್ಲ ನಾವು. ಬರಿ ನನ್ನ ಕತ್ತಿನ ಭಾಗ ಹಾಗೂ ಒಂದು ಕಡೆಯ ತೋಳಿನ ಭಾಗ ಮಾತ್ರ ಪೂರ್ಣಗೊಂಡಿದ್ದವು. ಇನ್ನೊಂದು ಕಡೆಯ ತೋಳನ್ನು ಇನ್ನೂ ಪ್ರಾರಂಭವೇ ಮಾಡಿರಲಿಲ್ಲ.
ಹೀಗಿರುವಾಗ ಒಂದು ದಿನ ನಾನು ನನ್ನವಳ ಕೈಯಲ್ಲಿ ಇರಬೇಕಾದರೇ ಅವಳು ಮೂರ್ಛೆ ಹೋದಳು. ಅವಳನ್ನು ಆಸ್ಪತ್ರೆಗೆ ಸೇರಿಸಲಾಯಿತು. ನಾನು ಮಾತ್ರ ನನ್ನವಳು ಈಗ ಬಂದಾಳು ಆಗ ಬಂದಾಳು ಎಂದು ಕಾಯುತ್ತಲೇ ಇದ್ದೆ. ಮತ್ತೆ ಯಾವಾಗ ಅವಳು ನನ್ನನ್ನು ಮುದ್ದಿಸುವುದು ಎಂದು ಇದಿರುನೋಡುತ್ತಿದ್ದೆ. ಆದರೆ ಆ ಸಮಯ ಬರಲೇ ಇಲ್ಲ. ನಾನು ಮತ್ತೆ ಅವಳನ್ನು ಯಾವತ್ತೂ ನೋಡಲೇ ಇಲ್ಲ. ಹೀಗೆ ಎಷ್ಟೋ ದಿನಗಳೇ ಉರುಳಿ ಹೋದವು. ವಾರಗಳೇ ಸರಿದು ಹೋದವು. ಆದರೆ ನನಗೆ ಮಾತ್ರ ಇನ್ನೊಂದುಸಾರಿ ಕೂಡ ನನ್ನವಳ ಮುಖದರ್ಶನವಾಗಲೆ ಇಲ್ಲ. ನನ್ನವಳು ಆಸ್ಪತ್ರೆ ಇಂದ ಮನೆಗೆ ಮರಳಲೇ ಇಲ್ಲ. ಆಗಲೇ ಅವರಿವರ ಮಾತುಗಳ ಮೂಲಕ ನನಗೆ ಕೇಳಿಬಂದದ್ದು ಅವಳು ನಮ್ಮನೆಲ್ಲ ಬಿಟ್ಟು cancer ಜೊತೆ ಹೋಗಿಬಿಟ್ಟಳು ಎಂದು. ಒಂದು ತೋಳಿಲ್ಲದ ನಾನು, ನನ್ನವಳು ಇಲ್ಲದೆ ಅಪೂರ್ಣ ನಾಗಿ ಮೂಲೆಯಲ್ಲಿ ಬಿದ್ದುಕೊಂಡೆ ನಾನು ಅವಳಿಲ್ಲದೆ ಅರ್ಥವಿಹೀನನಾಗಿ ಹೋದೆ.
ಒಂದು ರೀತಿಯಲ್ಲಿ ನನ್ನವಳನ್ನು ಕಳೆದುಕೊಂಡ ನಾನು ನನ್ನತನವನ್ನೂ ನನ್ನ ಅಸ್ತಿತ್ವವನ್ನೂ ಕಳೆದುಕೊಂಡೆ. ಈ ರೀತಿಯಾಗಿ ಅದೆಷ್ಟು ದಿನಗಳನ್ನು ಕಳೆದೆನೋ ಗೊತ್ತಿಲ್ಲ, ಒಂದು ದಿನ ನನ್ನವಳ ಇನಿಯ ನನ್ನ ಕಣ್ಣಿಗೆ ಕಾಣಿಸಿಕೊಂಡ. ಅವನನ್ನು ನೋಡಿದ ನನಗೆ ನನ್ನನ್ನೇ ನಾನು ಕನ್ನಡಿಯಲ್ಲಿ ನೋಡಿಕೊಂಡಂತೆ ಭಾಸವಾಯ್ತು. ನನಗೇನಾದರೂ ಮನುಷ್ಯನ ರೂಪ ಇದ್ದಿದ್ದರೆ ನಾನು ಅವನಂತೆಯೇ ಕಾಣುತ್ತಿದೆನೇನೋ ಅನ್ನಿಸಿತು. ಅವನಿಗೂ ಕೂಡ ಹಾಗೆ ಅನ್ನಿಸಿರಬಹುದು. ಅವನು ನನ್ನನ್ನು ಎತ್ತಿ ಕೈಯಲ್ಲಿ ಹಿಡಿದು ನನ್ನನ್ನು ಒಮ್ಮೆ ಕೂಲಂಕುಷವಾಗಿ ಪರೀಕ್ಷಿಸಿದ. ಕೆಲ ನಿಮಿಷಗಳ ಕಾಲ ಏನೂ react ಮಾಡದೇ ಕುಳಿತುಬಿಟ್ಟ. ಆಮೇಲೆ ನನ್ನವಳು ಮಾಡುತ್ತಿದಂತೆ ಮುಖಕ್ಕೆ ಗಟ್ಟಿಯಾಗಿ ಅವುಚಿಕೊಂಡು ಅಳಲು ಶುರುಮಾಡಿದ. ಅವನೊಟ್ಟಿಗೆ ನಾನು ಅತ್ತೆ. ಅದೆಷ್ಟು ಹೊತ್ತು ಇಬ್ಬರೂ ಒಬ್ಬರನ್ನು ಒಬ್ಬರು ತಬ್ಬಿಕೊಂಡು ಅತ್ತೇವೋ ಗೊತ್ತಿಲ್ಲ. ಆಮೇಲೆ ಅವನು ನನ್ನನ್ನು ಧರಿಸಿದ. ನನ್ನಲ್ಲಿ ಒಂದು ತೊಳಿರಲಿಲ್ಲ, ತನ್ನ ಮನದನ್ನೆಯನ್ನು ಕಳೆದುಕೊಂಡ ಅವನಲ್ಲಿ ಭಾವವಿರಲಿಲ್ಲ. ತೊಳಿಲ್ಲದೆ ನಾನು ಅಪೂರ್ಣನಾಗಿದ್ದೆ ಅವಳಿಲ್ಲದೆ ಅವನು ಅಪೂರ್ಣನಾಗಿದ್ದ. ಅವನು ನನ್ನನ್ನು ಧರಿಸಿ ನನ್ನಲ್ಲಿ, ಅವಳು ಅವನಿಗಾಗಿ ಹೆಣೆದ ಪ್ರೀತಿಯ ಪರಿಪೂರ್ಣತೆಯನ್ನು ಮೆರೆದು ನನ್ನ ಅಪೂರ್ಣತೆಯನ್ನು ಕಡಿದುಹಾಕಿದ್ದ. ಅವಳಂತೆ ನನ್ನಲಿ ಹೃದಯವಿಲ್ಲದಿದ್ದರೂ ಅವಳ ಅಪ್ಪುಗೆಯಲ್ಲಿ ಇರುವ ಅನುಭೂತಿಯನ್ನು ನಾನು ನೀಡಲು ಅಸಮರ್ಥನಾಗಿದ್ದರೂ ಅವಳು ನನ್ನಲಿ ಅವನಿಗಾಗಿ ಅಡಗಿಸಿದ್ದ ಬೆಚ್ಚನೆಯ ಭಾವ(ನೆಗಳು) ಅವನಿಗೆ ನಾನು ಮುಟ್ಟಿಸಿದ್ದೆ. ಹೀಗೇ ಅವಳಿಲ್ಲದೇ ಅಪೂರ್ಣರಾದ ನಾವಿಬ್ಬರೂ ನಮ್ಮಲ್ಲಿ ಅವಳು ಮೂಡಿಸಿದ್ದ ಪ್ರೀತಿಯ ಸಹಾಯದಿಂದ ನಮ್ಮದೇ ಆದ ರೀತಿಯಲ್ಲಿ ಪರಿಪೂರ್ಣತೆಯನ್ನು ಕಂಡುಕೊಂಡಿದ್ದೆವು.
By Sushma Odugoudar
Comments