By Sushma Odugoudar
ನನಗಾಗ 10-11 ವರ್ಷ ವಯಸ್ಸಿರಬಹುದೇನೋ.. ವಿವಿಧ ಕೇಬಲ್ ಚಾನೆಲ್ಗಳ ಗೀಳು ಇಲ್ಲದೆ ಕೇವಲ ದೂರದರ್ಶನವೇ ಪ್ರಮುಖ ಮನೋರಂಜನಾ ವಾಹಿನಿ ಆಗಿದ್ದ ಕಾಲ ಅದು. ಹಾಗಾಗಿ ಒಂದು ವಾರದಲ್ಲಿ ಒಂದೇ ಕನ್ನಡ ಚಲನಚಿತ್ರ (ಭಾನುವಾರ ಸಂಜೆ) ನೋಡುವ ಅವಕಾಶ ದೊರೆಯುತ್ತಿತ್ತು. ಅಂತಹದೊಂದು ಭಾನುವಾರ ‘ಬೆಳದಿಂಗಳ ಬಾಲೆ’ ಪ್ರಸಾರವಾಗುತ್ತಿತ್ತು. ಕಥಾನಾಯಕ ರೇವಂತ್ ತನ್ನ ಪ್ರೇಯಸಿಯನ್ನು ಹುಡುಕುತ್ತಿರುವ ಸನ್ನಿವೇಶದಲ್ಲಿ ‘ಮಾರ್ಕ್ಸ್ ‘ವಾದಿ ಒಬ್ಬನ ಮುಖಾಮುಖಿ ಆಗುತ್ತದೆ. ಆಗ ಅವರಿಬ್ಬರ ಮಧ್ಯ ಒಂದು ಹಾಸ್ಯಭರಿತ ಸ್ವಾರಸ್ಯಕರ ಸಂಭಾಷಣೆ ನಡೆಯುತ್ತದೆ. ಅದು ಹೀಗೆ
ರೇವಂತ್ (ರೇ): ಆ ಹುಡುಗಿ ಹೇಗಿದ್ದಳು ಅಂತ ಇರುವುದು ಇರುವಂತೆಯೇ ವರ್ಣಿಸು comrade
ಮಾರ್ಕ್ಸ್ವಾದಿ (ಮಾ): ಆ ಕಣ್ಣುಗಳು ಕಣ್ಣುಗಳಲ್ಲ... ಕಮಲದ ಪುಷ್ಪಗಳು! ಆ ಮೂಗು... ಆ ಮೂಗು... ಆ ಮೂಗು..
ರೇ: ಹೋಲಿಕೆ ಹೋಗಲಿ comrade.. ಅವಳು ಅಂದವಾಗಿದ್ದಾಳಾ?
ಮಾ: ಅವಳೇ ಸೌಂದರ್ಯ!! ಆ ಮೂಗು.. ಆ ಮೂಗು..
ರೇ: ಮೂಗಿನ ವಿಚಾರ ಬಿಟ್ಟು ಬಿಡಿ comrade… ಬೆಳ್ಳಗಿದ್ದಾಳಾ?
ಮಾ: ಆ ಮಲ್ಲಿಗೆ ಹೂಗಿಂತ ಬೆಳ್ಳಗೆ..
ಆ ಮೂಗು.. ಆ ಮೂಗು...ಆ ಮೂಗು...
ಅರ್ರೆ! ಏನಪ್ಪಾ ಇದು? ಅಮರ-ಮಧುರ-ಪ್ರೇಮ ಅಂತ ಕಥೆಯ ಶೀರ್ಷಿಕೆ ಕೊಟ್ಟು ಇಲ್ಲಿ ನೋಡಿದರೆ, ‘ಆ ಮೂಗು...ಆ ಮೂಗು...ಆ ಮೂಗು...’ ಅಂತ ಮೂಗಿನ ಗುಣಗಾನ ನಡೆಯುತ್ತಿದೆ ಅಂದುಕೊಳ್ಳುತ್ತಿದ್ದೀರಾ?? ಆ ರೀತಿ ಒತ್ತಿ ಒತ್ತಿ ‘ಆ ಮೂಗು’ ಅಂತಿರೋದಕ್ಕೆ ಕಾರಣವಿದೆ. ನಮ್ಮ ಇಂದಿನ ಪ್ರೇಮಕಥೆಯ ಕಥಾನಾಯಕಿ “ಮೂಗು”.
ಏನು? ಮೂಗು? ಅದು ಹೇಗೆ ಕಥಾನಾಯಕಿ ಆಗಲು ಸಾಧ್ಯ ಎಂದು ಯೋಚಿಸುತ್ತಿದ್ದೀರಾ? ಸರಿ, ಕಥೆಯನ್ನು ಓದಿ, ನಿಮಗೇ ಅರ್ಥವಾಗುತ್ತೆ. ಇದು ಕೇವಲ ಕಥೆಯಲ್ಲ, ನಮ್ಮ ‘ಅಜ್ಜಿ-ತಾತಾ’ ರ ಜೀವನದಲ್ಲಿ ನಡೆದ ಅತ್ಯಮೂಲ್ಯ ಸ್ವಾರಸ್ಯಭರಿತ ನೈಜಘಟನೆ. ಬನ್ನಿ ತಡಮಾಡದೆ ಅದು ಏನು ಎಂದು ಅರಿಯೋಣ.
ಅದೊಂದು ಶಾಲೆಗೆ ಬೇಸಿಗೆ ರಜೆ ಇರುವಂಥ ಸಮಯ. ಬೇರೆ ಬೇರೆ ಊರುಗಳಿಂದ ನಮ್ಮ ಅಜ್ಜಿಯ ಎಲ್ಲ ಮೊಮ್ಮಕ್ಕಳು ನಮ್ಮ ಮನೆಗೆ ರಜೆಗೆ ಬಂದಿದ್ದರು. ನಾವು ಒಂದು ಮಧ್ಯಾಹ್ನ ಅಜ್ಜಿಯನ್ನು ಛೇಡಿಸುತಿದ್ದೆವು. ನಮ್ಮ ಅಜ್ಜಿ ಗೆ ಆಗ 80-82ವರ್ಷ ವಯಸ್ಸು. ಆ ಇಳಿ ವಯಸ್ಸಿನಲ್ಲೂ ನಮ್ನ ಅಜ್ಜಿ ನಮ್ಮ ಮನೆಯಲ್ಲಿ ಎಲ್ಲರಗಿಂತ ಸುಂದರಿ ಎಂದರೆ ತಪ್ಪಾಗುತ್ತಿರಲಿಲ್ಲ. ಹೀಗಿರಬೇಕಾದರೆ, ನಾವು “ಅಜ್ಜಿ ನೀನು ತುಂಬಾ ಸ್ವಾರ್ಥಿ ಗೊತ್ತಾ? ನಿನ್ನ ರೂಪ, ನಿನ್ನ ಬಣ್ಣ, ನಿನ್ನ ನೆಟ್ಟನೆಯ ನೀಳವಾದ ಮೂಗನ್ನು ನಮ್ಮ ಯಾರ ಜೊತೆಗೂ ಹಂಚಿಕೊಂಡೆ ಇಲ್ಲಾ..ಅದಕ್ಕೆ ನೋಡು ನಾವು ಯಾರೂ ನಿನ್ನಷ್ಟು ಸುಂದರವಾಗಿ ಕಾಣುವುದಿಲ್ಲ” ಎಂದು ರಾಗ ಎಳೆದೆವು. ಅದಕ್ಕೆ ನಮ್ಮ ಅಜ್ಜಿ “ರೂಪ ಮತ್ತು ಬಣ್ಣ ಒಂದು ವೇಳೆ ಹಂಚಿಕೊಂಡರೂ ಸರಿ, ನಾನು ಮಾತ್ರ ನನ್ನ ಮಾನ-ಪ್ರಾಣ ಕಾಪಾಡಿದ ಈ ಮೂಗನ್ನು ಯಾರಿಗೂ ಕೊಡಲ್ಲ. ಅದು ನನ್ನ ಗರ್ವ...ನನ್ನ ಅಭಿಮಾನ..ನನ್ನ ಸ್ವತ್ತು...” ಎಂದು ಗತ್ತಿನಿಂದ ಹೇಳಿದರು. ಅಷ್ಟೇ ಅಲ್ಲದೆ “ನಿಮ್ಮ ತಾತನನ್ನು ಸೇರುವ ಸಮಯ ಬಂದಾಗ (ಆಗಾಗಲೇ ನಮ್ಮ ತಾತಾ ಸ್ವರ್ಗವಾಸಿಯಾಗಿ 9-10 ವರ್ಷಗಳಾಗಿದ್ದವು) ಅವರಿಗೆ ಹೇಳುತ್ತೇನೆ ನೋಡಿ ನೀವು ತುಂಬಾ ಇಷ್ಟ ಪಟ್ಟ ಈ ಮೂಗನ್ನು ಹಾಗೇ ಕಾಪಾಡಿಕೊಂಡು ಬಂದಿದ್ದೇನೆ” ಅಂತ ಬೇರೆ ಅಂದ್ರು. ಇದನ್ನು ಕೇಳಿದ ನಮಗೆ ಆಶ್ಚರ್ಯವಾಯಿತು. ಮಾನ-ಪ್ರಾಣ ಕಾಪಾಡಿದ ಮೂಗು ಅಂದರೆ ಏನು ಅರ್ಥ ಅಜ್ಜಿ? ಎಂದು ಕೇಳಿದೆವು. ಆಗ ನಮ್ಮ ಅಜ್ಜಿ ಹೇಳ್ಳಿದ್ದು ಒಂದು ಸುಂದರ ಪ್ರೇಮಕಥೆ. ಅದು ಅಂತಿಂಥ ಕಥೆ ಅಲ್ಲ. ನಮ್ಮ ಅಜ್ಜಿ-ತಾತಾ ಅವರ ಪ್ರೇಮಕಥೆ. ಮೊದಲ ನೋಟದಲ್ಲೇ ನಮ್ಮ ತಾತನ ಮನಸ್ಸು ಸೂರೆಗೊಂಡ ನಮ್ಮ ಅಜ್ಜಿಯ ಮೂಗಿನ ಕಥೆ. ನಮ್ಮ ಅಜ್ಜಿ-ತಾತಾ ರ ಮದುವೆ ಕಥೆ. ನಮ್ಮ ಅಜ್ಜಿ ಆಗ ಹೇಳಿದನ್ನು ಈಗ ಹಾಗೆಯೆ ನಿಮ್ಮೆದುರಿಗೆ ಇಲ್ಲಿ ಬಿಚ್ಚಿಡುತ್ತೇನೆ...
1936 ಅಥವಾ 1937 ರಲ್ಲಿ ನಮ್ಮ ಅಜ್ಜಿ-ತಾತಾ ಮದುವೆ ನಡೆದದ್ದು. ಮದುವೆಯ ದಿನ, ನಮ್ಮ ಅಜ್ಜಿ- ಅಂದರೇ ಮದುವಣಗಿತ್ತಿ, ತಮ್ಮ ಜೀವನದ ಅತ್ಯಮೂಲ್ಯ ದಿನದಂದು ಹಸೆಮಣೆ ಏರಲು ತಯಾರಾಗಿ ನಿಂತಂತಹ ಸಮಯ. ನಮ್ಮ ತಾತಾ ಅಜ್ಜಿಯನ್ನು ನೋಡಲು ಕಾತುರದಿಂದ ಕಾಯುತ್ತಿದಂತ ಸಮಯ. ಕೊನೆಗೂ ಶುಭಘಳಿಗೆ ಸಮೀಪಿಸಿ, ಅಜ್ಜಿ ತಾತಾ ಒಬ್ಬರನೊಬ್ಬರು ಮುಖಾಮುಖಿ ಆದಾಗ ಅಲ್ಲಿ ನಡೆದ ಘಟನೆಯೇ ಬೇರೆ. ಮದುಮಗಳು ಎಲ್ಲರೆದುರು ಹಾಜರಾಗಿದ್ದೆ ತಡ, ಮದುವೆ ಮನೆಯಲ್ಲಿ ಏನೋ ಗುಸು-ಗುಸು, ಪಿಸು-ಪಿಸು... ಗೌಜು ಗೊಂದಲಗಳು ಶುರುವಾದವಂತೆ. ಗಂಡಿನ ಕಡೆಯವರು ಹೆಣ್ಣಿನ ಕಡೆಯವರಿಗೆ ‘ನೀವು ನಮಗೆ ಮೋಸ ಮಾಡಿದ್ದೀರಾ, ವಧುವನ್ನು ಬದಲಾಯಿಸಿದ್ದೀರಾ’ಎಂಬ ಆರೋಪಗಳ ಸುರಿಮಳೆ ಶುರುಮಾಡಿಕೊಂಡರಂತೆ.
ಅಷ್ಟಕ್ಕೂ ಈ ಗೊಂದಲ ಶುರುವಾಗಲು ಕಾರಣ ಏನು? ನಮ್ಮ ಅಜ್ಜಿ ಆ ದಿನ ತೊಟ್ಟಂತಹ ಸೀರೆ, ಅವರ ಕೇಶ ವಿನ್ಯಾಸ ಹಾಗೂ ಒಟ್ಟಾರೆ ನಮ್ಮ ಅಜ್ಜಿ ಮದುವಣಗಿತ್ತಿ ಆಗಿ ತಯಾರಾಗಿ ನಿಂತಿದ್ದ ರೀತಿ. ವಿಸ್ತಾರವಾಗಿ ಹೇಳಬೇಕೆಂದರೆ...
ಆಗೆಲ್ಲ ವಿವಿಧ ಸೌಂದರ್ಯ ವರ್ಧಕ ಪ್ರಸಾಧನಗಳು (make-up) ಇರಲಿಲ್ಲ. Make-up ಹೋಗಲಿ ಒಳ್ಳೆ shampoo ಕೂಡ ಬಳಸುತ್ತಿರಲಿಲ್ಲ. ತಲೆಗೆ ಶಿಕಾಕಾಯಿ, ಸ್ನಾನಕ್ಕೆ ಕಡಲೆಹಿಟ್ಟು-ಹಾಲಿನ ಮಿಶ್ರಣ ಬಳಸುತ್ತಿದ್ದರಂತೆ. ಮದುಮಗಳಿಗೆ ಮದುವೆ ದಿನ ನಸುಕಿನಲ್ಲಿ, ತಲೆಗೆ ಎಣ್ಣೆ ನೀವಿ, ಮೈಗೆ ಅರಿಶಿನ ಸವರಿ ಬಿಸಿ ನೀರು ಎರೆದು ಸ್ನಾನ ಮಾಡಿಸುವುದು ಅಷ್ಟೇ, ಮದುವೆ ಶೃಂಗಾರದ ಪ್ರಮುಖ ಅಂಶಗಳಾಗಿದ್ದವಂತೆ. ಈ ಮೊದಲೇ ಹೇಳಿದಂತೆ ಶಿಕಾಕಾಯಿ ಮತ್ತು ಕಡಲೆಹಿಟ್ಟು-ಹಾಲಿನ ಮಿಶ್ರಣ ಬಳಸಿ ಅಜ್ಜಿಗೆ ಸ್ನಾನ ಮಾಡಿಸಲಾಗಿತ್ತಂತೆ. ಇದಾದ ನಂತರ ಹುಬ್ಬಳ್ಳಿ ಮಗ್ಗದಲ್ಲಿ ನೇಯ್ದ (ನೋಡಲು ಅದು ಕೂಡ ಇಲಕಲ್ ಸೀರೆಯಂತೆಯೇ ಇರುತ್ತೆ) ಕಡು ನೀಲಿ ಬಣ್ಣದ ಸೀರೆಯನ್ನು ಉಡಿಸಿ ನಮ್ಮ ಅಜ್ಜಿಯನ್ನು ಶೃಂಗರಿಸಿದ್ದರಂತೆ. ಸ್ನಾನ ಮಾಡಿಸುವಾಗ ಎಣ್ಣೆ ಮತ್ತು ಅರಿಶಿನ ಸರಿಯಾಗಿ ಹೋಗಿರಲಿಲ್ಲ ಅನ್ನಿಸುತ್ತೆ ಮಗ್ಗದಲ್ಲಿ ನೇಯ್ದ ಸೀರೆ ಉಡಿಸುವಾಗ ಅದರ ಕಡು ನೀಲಿ ಬಣ್ಣ ನಮ್ಮ ಅಜ್ಜಿಯ ಮೈ-ಮುಖಗಳಿಗೆ ಸವರಿ, ಶ್ವೇತಸುಂದರಿಯಾಗಿದ್ದ ನಮ್ಮ ಅಜ್ಜಿ ಇತ್ತ ಕಪ್ಪು ಬಣ್ಣವೂ ಅಲ್ಲ, ಬಿಳಿ ಬಣ್ಣವೂ ಅಲ್ಲ, ನೀಲಿ ಬಣ್ಣವೂ ಅಲ್ಲ...ಏನೋ ಒಂದು ವಿಚಿತ್ರ ಅವಲಕ್ಷಣವಾಗಿ ಕಾಣುತಿದ್ದರಂತೆ. ಸಾಲದಕ್ಕೆ ಆ ದಿನ ಅವರಿಗೆ ಮಾಡಿದ ಕೇಶ ವಿನ್ಯಾಸ ಕೂಡ ಅವರ ಸುಂದರ ಮುಖಕ್ಕೆ ಹೊಂದದೆ ಅವರು ಇರುವ ವಯಸ್ಸಿಗಿಂತ ದೊಡ್ಡವರಾಗಿ ಕಾಣುತಿದ್ದರಂತೆ.
ಇದೆಲ್ಲ ಸೇರಿಕೊಂಡು ಒಂದು ದೊಡ್ಡ ಗೊಂದಲಕ್ಕೆ ಕಾರಣವಾಗಿ, ನಮ್ಮ ತಾತನ ಮನೆಯ ಹಿರಿಯರೆಲ್ಲ ‘ನಮಗೆ ಹುಡುಗಿ ತೋರಿಸುವ ಶಾಸ್ತ್ರದಲ್ಲಿ ಸುಂದರ ಹುಡುಗಿಯನ್ನು ತೋರಿಸಿ ಇಲ್ಲಿ ಬೇರೇ ಹುಡುಗಿಯನ್ನೇ ವಧು ಎಂದು ನಿಲ್ಲಿಸಿದ್ದೀರಾ. ಇದು ಮೋಸ. ನಾವು ಈ ಮದುವೆ ಮುರಿದುಕೊಳ್ಳುತ್ತೇವೆ..’ ಎಂದು ಬೆದರಿಕೆ ಕೂಡ ನೀಡುತ್ತಿದ್ದರಂತೆ. ಅಜ್ಜಿ ಮನೆ ಕಡೆಯವರೋ ಇವರಿಗೆ ಇರುವ ನಿಜಾಂಶ ತಿಳಿಸಿ ಇವರ ಮನ ಒಲಿಸಲು ಪ್ರಯತ್ನ ಪಡುತ್ತಿದ್ದರಂತೆ. ಇತ್ತ ಹಿರಿಯರೆಲ್ಲ ದೊಡ್ಡ ಗೊಂದಲದಲ್ಲಿ ಸಿಲುಕಿರಬೇಕಾದರೆ ಅತ್ತ ನಮ್ಮ ತಾತನೊಟ್ಟಿಗೆ ಬಂದಿದ್ದ ಅವರ ಸ್ನೇಹಿತರು ‘ನಿನಗೆ ತೋರಿಸಿ ಒಪ್ಪಿಗೆ ಆಗಿದ್ದ ಸುಂದರ ಹುಡುಗಿ ಇವಳಲ್ಲ..ನೀನು ಇನ್ನ್ಯಾರನ್ನೋ ಮದುವೆ ಆಗೋ ಅವಶ್ಯಕತೆ ಇಲ್ಲಾ. ಆಗಿದ್ದಾಗಲಿ ನೀನು ಮದುವೆ ಮನೆ ಬಿಟ್ಟು ಓಡಿ ಹೋಗು, ಮುಂದೆ ಬಂದದನ್ನು ನೋಡಿಕೊಳ್ಳೋಣ’ ಎಂದು ಅವರನ್ನು ಹುರಿದುಂಬಿಸುತ್ತಿದ್ದರಂತೆ. ನಮ್ಮ ಅಜ್ಜಿಯೋ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತೆ, ಮದುವೆ ಮುರಿದರೆ ಏನು ಗತಿ? ಮನೆತನದ ಮರ್ಯಾದೆ ಮಣ್ಣು ಪಾಲಾದಂತೆಯೇ.. ತಪ್ಪಲದ ತಪ್ಪಿಗೆ ಯಾಕೆ ಈ ಶಿಕ್ಷೆ ಎಂದು ನೊಂದುಕಿಳ್ಳುತ್ತಿದ್ದರಂತೆ.
ಹೀಗಿರಬೇಕಾದರೆ, ನಮ್ಮ ತಾತಾ ಇತ್ತ ತಮ್ಮ ಹಿರಿಯರ ಮಾತಿಗೂ ಕಿವಿಗೊಡದೆ, ಸ್ನೇಹಿತರ ಉತ್ತೇಜನಕ್ಕೂ ಒಳಗಾಗದೆ ‘ಏನೋ ಗೊಂದಲ ನಡೆದಿದೆ ಆದರೆ ನನ್ನ ಮನಸು ಹೇಳುತ್ತಿದೆ ನಾನು ಮನಸೋತಿರುವ ಹುಡುಗಿ, ನನ್ನವಳನ್ನಾಗಿ ಮಾಡಿಕೊಳ್ಳಬಯಸಿದ ಹುಡುಗಿ ಇವಳೇ ಎಂದು. ಹುಡುಗಿ ನೋಡುವ ಶಾಸ್ತ್ರದಲ್ಲಿ ಕಾಣಿಸಿದಕ್ಕಿಂತ ಈ ಹುಡುಗಿ ದೊಡ್ಡವಳು ಕಾಣುತ್ತಿರಬಹುದು, ಬಣ್ಣ ಕೂಡ ಬೇರೇ ಅನಿಸುತ್ತಿರಬಹುದು, ಆದರೆ...
ಆ ಮೂಗು.... ಆ ಮೂಗು...ಆ ಮೂಗು...ಮಾತ್ರ ನನ್ನ ಮನಸೆಳೆದ, ಮನಸೂರೆಗೊಂಡ ನೀಳವಾದ ನೆಟ್ಟನೆಯ ಮೂಗು. ಏನು ಬದಲಾದರು ಸರಿ, ಮೂಗು ಮಾತ್ರ ಅದೇ ಇದೆ. ಮದುವೆ ಆಗಬೇಕಿರುವುದು ನಾನು ತಾನೇ? ಅಂದ ಮೇಲೆ ನನ್ನ ನಿರ್ಧಾರವೇ ಕೊನೆಯ ನಿರ್ಧಾರವಾಗಲಿ. ಆ ಮೂಗು ಹೇಳುತ್ತಿದೆ ಈ ಹುಡುಗಿ ನನ್ನವಳೇ ಎಂದು. ನಾನು ಇವಳನ್ನೇ ಮದುವೆ ಆಗುತ್ತೇನೆ ಎಂದು ದಿಟ್ಟ ನಿರ್ಧಾರವನ್ನು ತಿಳಿಸಿದರಂತೆ. ತಾತನ ನಿರ್ಧಾರದ ಎದುರು ಸೋತ ಎಲ್ಲರೂ, ಮುಂದೆ ನಡೆಯಬೇಕಾಗಿದ್ದ ಎಲ್ಲ ಮದುವೆ ಕಾರ್ಯಗಳನ್ನು ನಡೆಸಿ ಮದುವೆ ಮುಗಿಸಿಕೊಂಡು ನಮ್ಮ ಅಜ್ಜಿಯನ್ನು ಮನೆ ತುಂಬಿಸಿಕೊಂಡರಂತೆ. ಹೀಗೆ, ಪರಿಸ್ಥಿತಿ ಎಷ್ಟೇ ವಿಪರೀತವಾಗಿದ್ದರೂ, ನಮ್ಮ ತಾತನ ಮನಸೆಳೆದಿದ್ದ ಆ ಮೂಗು...ನಮ್ಮ ಅಜ್ಜಿ ನಮ್ಮ ಮನೆ-ಮನಗಳನ್ನು ತುಂಬುವಂತೆ ಮಾಡಿತ್ತು.
ಇದನೆಲ್ಲ ಹೇಳುತ್ತಿದ್ದ ನಮ್ಮ ಅಜ್ಜಿಯ ಮುಖ ನವ ವಧುವಿನಂತೆ ಲಜ್ಜೆಯಿಂದ ಕೆಂಪಾಗಿತ್ತು. ಮೂಗು, ‘ನೋಡಿದಿರಾ ನನ್ನ ಕರಾಮತ್ತು’ ಎಂದು ನಗುತ್ತಿರುವಂತೆ ತನ್ನ ಮೂಗುಬೊಟ್ಟನು ಮಿನುಗಿಸುತ್ತಿತ್ತು. ಮೂಗಿನ ಪ್ರಸಂಗ ಕೇಳುತ್ತಿದ್ದ ನಮೆಲ್ಲರ ಮುಖದಲ್ಲೂ ನಗು ಮೂಡಿತ್ತು. ನಮ್ಮ ತಾತ, ನಮ್ಮ ಅಜ್ಜಿ, ಹಾಗೂ ಅಜ್ಜಿಯ ಮೂಗಿನ ಕಥೆ ..ನಮ್ಮ ಮನಸಿನಲ್ಲಿ ಅಬ್ಬಾ!! ಎಂತಹ ಸೊಗಸಾದ ಮೂಗಿನ ಕಥೆ ಎಂಬ ಭಾವಗಳನ್ನು ಮೂಡಿಸುತಿತ್ತು. ಹೀಗಿರುವಾಗ ನಮ್ಮ ಅಜ್ಜಿ ತಮ್ಮ ಮೂಗಿನ ಬಗ್ಗೆ ಅಷ್ಟು possessive ಇದದ್ದು ನನಗೆ ಸರಿ ಎಂದೇ ಅನಿಸಿತು. ನಾನು ನಮ್ಮ ಅಜ್ಜಿ-ತಾತಾ ರ ಜೀವನದ ಈ ಪ್ರಸಂಗವನ್ನು ಒಂದು ಪ್ರೇಮಕಥೆ ಎಂದು ಹೇಳುತ್ತಿರುವಾಗ “ಮೂಗೇ ಕಥಾನಾಯಕಿ” ಅಂದದ್ದೂ ಅದಕ್ಕಾಗಿಯೇ. ಈಗ ಇದನ್ನು ನೀವೂ ಒಪ್ಪುತ್ತೀರಲ್ಲವಾ...!!!??
By Sushma Odugoudar
Comments