By Deepa N
ಮದುವೆ ಎಂಬ ಶಾಸ್ತ್ರದೊಳಗೆ ಆಡಂಬರ।
ಆಕೆಯೊಳಗೆ ನಾಚಿ ಅರಳುತ್ತಿರುವ ಸಂತೋಷದ ಕನಕಾಂಬರ।
ತುಂಬಿತ್ತು ಎಲ್ಲರ ಪವಿತ್ರ ಹಾರೈಕೆಗಳ ಹಂದರ।
ಕಾದಿತ್ತು ಅವಳಿಗಾಗಿ ಕದವ ತೆರೆದು ಹೊಸ ಮಂದಿರ।
ಮರೆಯಲಾಗದ ಸೋಬಾನ ರಾತ್ರಿಯೂಟ।
ರಸಲೀಲೆಗಳ ಮೈಮನ ತುಂಬಿದ ಚೆಲ್ಲಾಟ।
ದಣಿದರು ಬಿಡನೆನ್ನುವ ಇನಿಯನ ಕಾಟ।
ಗರ್ಭದೊಳಗೆ ನೆಟ್ಟಿತು ಈ ಆಟದ ಗೂಟ।
ಎಣಿಕೆಯೊಳಗೆ ಓಡುವ ನವಮಾಸಗಳ ಕನಸು।
ನಾಲಿಗೆಗು ರುಚಿಯ ಏರು ಪೇರಿಂದ ಯಾಕೋ ಮುನಿಸು।
ಕೈಗೆಟಕದ ಸಂತೋಷ ನವಮಾಸ ತುಂಬುವ ಸೊಗಸು।
ಮಡಿಲ ಸೇರಿದ ಕಂದನ ಮೊಗವೇ ಅವಳ ನನಸು।
ಅಯ್ಯೋ ವಿಧಿಯೆ,,
ಕಂಡ ಕನಸುಗಳೆಲ್ಲ ಸುಳ್ಳಾದವು।
ಕಂದನ ಬದುಕಿಗೆ ಮುಳ್ಳಾದವು।
ಬೇಡವಿತ್ತು ಈ ತಾಯ್ತನದ ಮೇವು।
ನೋಡಲಾಗುತ್ತಿಲ್ಲ ಹೊತ್ತು ಹೆತ್ತ ಎಳೆಕಂದನ ಸಾವು।
ಕಾರಣ ತಿಳಿಯುವ ಹಂಬಲವೆ ನಿಮಗೆ।
ಹೆಣ್ಣೆಂದು ಕೊನೆಯಾಗಿತ್ತು ರಾಕ್ಷಸರ ಬಲಿಗೆ।
ಯಾಕೆ ಜಗದೊಳಗೆ ತಾರತಮ್ಯ ಸುಲಿಗೆ।
ಹೀಗಾದರೆ ರಕ್ಷಣೆ ಎಲ್ಲಿಂದ ಹೆಣ್ಣುಮಕ್ಕಳಿಗೆ।
ಗಂಡು ಗಂಡೆಂದು ನಶಿಸುತ್ತಿರುವ ಹೆಣ್ಣು।
ಮರೆತರೋ ಹೆಣ್ಣೇ ಗಂಡಿನ ಬಾಳ ಹೊನ್ನು।
ಗಂಡಿಗಾಗಿ ಹೆಣ್ಣು ಹೆಣ್ಣಿನ ಶತ್ರು ಕಣ್ಣು ।
ಎಂದು ಸೇರುವುದೋ ಈ ಪಾಪಗುಣ ಮಣ್ಣು।
By Deepa N
Comments